ಪತ್ರಿಕೆಯ ಸೂಕ್ಷ್ಮ ಪರಿಚಯ

ಜಗತ್ತಿನ ಧರ್ಮ ಗ್ರಂಥಗಳಲ್ಲಿ ಅತ್ಯುತ್ತಮ ಗ್ರಂಥಗಳ ಸಾಲಿನಲ್ಲಿ ನಿಲ್ಲುವಂತಹ ಏಕೈಕ ಗ್ರಂಥವೆಂದರೆ ಶ್ರೀಮದ್ಭಗವದ್ಗೀತಾ. ಜಗತ್ತಿನ ಎಲ್ಲಾ ದೇಶಗಳಲ್ಲಿ, ಎಲ್ಲಾ ಭಾಷೆಗಳಲ್ಲಿ, ಎಲ್ಲಾ ಧರ್ಮಗಳಲ್ಲಿ ಹೆಸರಾಂತ ವಿದ್ವಾಂಸರೆಲ್ಲಾ ಹಾಡಿ ಹೊಗಳಲ್ಪಡುತ್ತಿರುವ ಗೀತೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಂತಹ ಅದ್ಭುತ ಆಧ್ಯಾತ್ಮಿಕ ಗ್ರಂಥದ ಪ್ರಚಾರಕ್ಕಾಗಿಯೇ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ಸೇವೆಗೇ ಪ್ರತಿರೂಪವಾಗಿದ್ದ ರಾಜ್ಯ ಪ್ರಶಸ್ತಿ ವಿಜೇತ ಕೀರ್ತಿ ಶೇಷ ಶ್ರೀ ಎಸ್. ಸುಬ್ರಹ್ಮಣ್ಯ ಶ್ರೇಷ್ಠಿಯವರು ಅಜ್ಜಂಪುರದಂತಹ ಪುಟ್ಟ ಗ್ರಾಮದಲ್ಲಿದ್ದುಕೊಂಡು ಗೀತಾಮಿತ್ರ ಆಧ್ಯಾತ್ಮಿಕ ಮಾಸಪತ್ರಿಕೆಯ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ಭಗವಾನ್ ಗೀತಾಚಾರ್ಯನ ದಿವ್ಯ ಸಂದೇಶವನ್ನು ಪ್ರಸಾರ ಮಾಡಿದರು.

ಗೀತಾಮಿತ್ರ ಮಾಸಪತ್ರಿಕೆಯು ೧೯೬೩ರ ಜನವರಿ ತಿಂಗಳಿನಲ್ಲಿ ಶ್ರೀ ಸುಬ್ರಹ್ಮಣ್ಯ ಶೆಟ್ಟರ ಸಂಪಾದಕತ್ವದಲ್ಲಿ ಮತ್ತು ಶ್ರೀಶ್ರೀಶ್ರೀ ಶಂಕರಾನಂದಸ್ವಾಮೀಜಿಗಳ ಆಶೀರ್ವಾದದಿಂದ ಪ್ರಾರಂಭವಾಯಿತು. ಮುಂದೆ ಅವರ ಕಾಲಾ ನಂತರ ಅವರ ಸುಪುತ್ರರಾದ ಎಸ್.ರಾಜಗೋಪಾಲ ಗುಪ್ತರವರ ಸಂಪಾದಕತ್ವದಲ್ಲಿ ಪತ್ರಿಕೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮುಂದುವರೆಯಿತು. ಈಗ ಆಗಸ್ಟ್ ೨೦೦೪ನೇ ಇಸವಿಯಿಂದ ದಿವಂಗತ ಶ್ರೀ ಎಸ್. ಸುಬ್ರಹ್ಮಣ್ಯ ಶೆಟ್ಟರ ಕಿರಿಯ ಪುತ್ರಿಯಾದ ಶ್ರೀಮತಿ ಶಾರದಾಗೋಪಾಲ್ ಎಂ.ಎ gವರ ಪ್ರಧಾನ ಸಂಪಾದಕತ್ವದಲ್ಲಿ ಇನ್ನೂ ಹೆಚ್ಚು ವಿಚಾರಗಳಿಂದ ಪತ್ರಿಕೆಯು ಮುನ್ನಡೆಯುತ್ತಲಿದೆ. ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿದೆ. ಕನ್ನಡಿಗರು ಇರುವಂಥಹ ದೇಶದ ಎಲ್ಲಾ ಭಾಗಗಳಿಗೂ ಪತ್ರಿಕೆಯು ಶ್ರೀ ಕೃಷ್ಣನ ಸಂದೇಶಗಳನ್ನು ಸಾರುತ್ತಲಿದೆ. ವಿಶೇಷವೆಂದರೆ ಅಮೆರಿಕ, ದುಬಾಯ್, ಆಷ್ಟ್ರೇಲಿಯಾ ಮುಂತಾದ ಹೊರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಕೂಡ ಗೀತಾಮಿತ್ರ ಪತ್ರಿಕೆಯನ್ನು ತರಿಸಿಕೊಂಡು ಗೀತಾಮೃತವನ್ನು ಪಾನ ಮಾಡುತ್ತಿದ್ದಾರೆ.

ಅಜ್ಜಂಪುರದಲ್ಲಿ ನೆಲೆಸಿದ್ದ ಶ್ರೀಸುಬ್ರಹ್ಮಣ್ಯಶೆಟ್ಟರ ಸಮಕಾಲೀನರಾದ ಶಿವಾನಂದಾಶ್ರಮದ ಗುರುಗಳಾದ ಶ್ರೀಶ್ರೀಶ್ರೀ ಶಂಕರಾನಂದ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಪ್ರಾರಂಭವಾದ ಪತ್ರಿಕೆ ಮಾನವನಾಗಿ ಹುಟ್ಟದ ಪ್ರತಿಯೊಬ್ಬರಿಗೂ ಅತ್ಯಾವಶ್ಯಕವಾಗಿ ತಿಳಿಯಲೇಬೇಕಾದಂತಹ ಉತ್ಕೃಷ್ಠವಾದ ಆತ್ಮ ಜ್ಞಾನವನ್ನು ಪ್ರಚುರಪಡಿಸುತ್ತಿದೆ. ಅತ್ಯಂತ ಗಹನವಾದ ವಿಚಾರಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಕಾಂತಾ ಸಂಹಿತೆಯಂತೆ ಪ್ರೀತಿಯಿಂದ ತಿಳಿಸಿಕೊಡುತ್ತಲಿದೆ. ಮೋಕ್ಷ ಪಡೆಯಲು ಯೋಗಿಗಳು ಅಹರ್ನಿಶಿ ಪ್ರಯತ್ನಿಸಿ ಪಡೆಯುವಂತಹ ಮೋಕ್ಷ ಮಾರ್ಗವನ್ನು ಸಾಮಾನ್ಯ ಓದುಗರೂ ಸಾಧಿಸಲು ಸಾಧ್ಯವಾಗುವಂತಹ ಸುಲಭೋಪಾಯಗಳನ್ನು ತಿಳಿಸುತ್ತಾ ಪ್ರತಿಯೊಬ್ಬ ಓದುಗನಲ್ಲಿಯೂ ಶಾಂತಿ ನೆಮ್ಮದಿಗಳನ್ನು ಉಂಟುಮಾಡುತ್ತಿದೆ. ಓದುಗರು ಮೆಚ್ಚುಗೆ ಸೂಚಿಸಿ ಬರೆಯುತ್ತಿರುವ ಪತ್ರಗಳು ಅಪಾರ ಸಂಖ್ಯೆಯಲ್ಲಿವೆ. ತಿಂಗಳಿಗೆ ಮೂರು ಸಾವಿರಕ್ಕೂ ಹೆಚ್ಚು ಪ್ರತಿಗಳು ಪ್ರಸಾರವಾಗುತ್ತಲಿವೆ. ಗೀತಾ ತತ್ವ ಪ್ರಚಾರದ ಏಕೈಕ ಕನ್ನಡ ಮಾಸಪತ್ರಿಕೆ ಇದಾಗಿದೆ.

ಭಗವದ್ಗೀತೆಯ ಬಗ್ಗೆ ಪರಿಚಯ

ಭಾರತದ ಎರಡು ಮಹಾನ್ ಕಾವ್ಯಗಳಲ್ಲಿ ಮಹಾಭಾರತವೂ ಒಂದು. ಮಹಾಭಾರತದ ಒಂದು ಭಾಗವಾದ ಈ ಭಗವದ್ಗೀತೆಯು ಪವಿತ್ರವಾದ ಗ್ರಂಥವಾಗಿದೆ. ಮಹಾಬರತದ ಮಧ್ಯಭಾಗದಲ್ಲಿ ಇಡೀ ಮಹಾಭಾರತಕ್ಕೆ ಬೆಳಕು ನೀಡುವಂತೆ ರಾರಾಜಿಸುತ್ತಿದೆ. ಇದು ಬಹುಶಃ ವಿಶ್ವದಲ್ಲಿಯೇ ಅತಿ ಹೆಚ್ಚಿನ ಕೀರ್ತಿಯನ್ನು ಪಡೆದಿರುವಂಥಹ ಸದ್ಗ್ರಂಥವಾಗಿದೆ. ನಮ್ಮ ಸನಾತನ ಧರ್ಮಕ್ಕೆ ಇದು ವಿಶ್ವಕೋಶದಂತಿದೆ ಎನ್ನಬಹುದು. ಈ ಗ್ರಂಥದಲ್ಲಿ ನಮ್ಮ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳನ್ನೂ ಕಾಣಬಹುದಾಗಿದೆ. ಭಗವದ್ಗೀತೆ ಅತಿ ಹೆಚ್ಚಿನ ಭಾಷೆಗಳಿಗೆ ಭಾಷಾಂತರವಾಗಿರುವ ಹೆಗ್ಗಳಿಕೆ ಇದೆ. ಸರ್ವೋಪನಿಷದೋಗಾವೋ ಎಂಬಂತೆ ಎಲ್ಲಾ ಉಪನಿಷತ್ತುಗಳ ಸಾರ ಸಂಗ್ರಹವೇ ಭಗವದ್ಗೀತೆಯಾಗಿದೆ. ಯಾ ಸ್ವಯಂ ಪದ್ಮನಾಭಸ್ಯ ಇದು ಭಗವಂತನೇ ಸ್ವತಃ ಹೇಳಿರುವ ಗೀತೆಯಾಗಿದೆ. ಅರ್ಜುನನನ್ನು ನಿಮಿತ್ತ ಮಾಡಿಕೊಂಡು ಇಡೀ ಮಾನವ ಜನಾಂಗಕ್ಕೆ ಭಗವಂತನು ಹೇಳಿರುವ ಗೀತೆಯಾಗಿದೆ. ಯಾವ ಒಂದು ವಿದ್ಯೆಯೆಯನ್ನು ತಿಳಿಯುವುದರಿಂದ ಮತ್ತೆ ಯಾವ ವಿದ್ಯೆಯ ಅವಶ್ಯಕತೆ ಇಲ್ಲವೋ ಅಂತಹ ಬ್ರಹ್ಮವಿದ್ಯೆಯನ್ನು ಭಗವದ್ಗೀತೆಯಲ್ಲಿ ತಿಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಶ್ಲೋಕಗಳೂ ಮಂತ್ರಗಳೇ ಅಗಿವೆ. ಭಕ್ತಿಯಿಂದ ಪಠಿಸಿದಲ್ಲಿ ಅದರ ಫಲ ಅಪಾರ. ಒಂದು ವೇಳೆ ಇದರ ಅರ್ಥಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಆತ ನಿಜವಾಗಿಯೂ ಧನ್ಯನಾಗುತ್ತಾನೆ ಮತ್ತು ಪರಮ ಪದವಿಯಾದ ಮೋಕ್ಷಕ್ಕೆ ಅರ್ಹನಾಗುತ್ತಾನೆ. ಸಾವಿರಾರು ವರ್ಷಗಳ ಹಿಂದೆ ಬೋಧಿಸಿರು ಈ ತತ್ವಗಳು ಇಂದಿಗೂ ಸರ್ವ ಮಾನ್ಯವಾಗಿವೆ. ಇಂದಿನ ವಿಜ್ಞಾನ ಯುಗದ ಯಾಂತ್ರಿಕ ಜೀವನದಲ್ಲಿ ಇನ್ನೂ ಹೆಚ್ಚು ಅವಶ್ಯಕವಾಗಿ ಬೇಕಾದಂತಹ ಜೀವನ ಮೌಲ್ಯಗಳನ್ನು ಒಳಗೊಂಡಿವೆ.

ಬಹಳಷ್ಟು ಜನ ಮಹಾತ್ಮರುಗಳು ಈ ಭಗವದ್ಗೀತೆಯಿಂದ ಆಕರ್ಷಿತರಾಗಿದ್ದಾರೆ. ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ವಿನೋಬಾಜಿಯವರು, ಮಹಾತ್ಮ ಗಾಂಧೀಜಿಯವರು, ಪ್ರಭುಪಾದ ಸ್ವಾಮೀಜಿ, ಶ್ರೀ ಶಂಖರಾನಂದ ಸ್ವಾಮೀಜಿ ಮುಂತಾದವರು ಭಗವದ್ಗೀತೆಯ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. ಗಾಂಧೀಜಿಯವರಂತೂ ಗೀತೆಯಲ್ಲಿ ತಮ್ಮ ಎಲ್ಲಾ ಸಮಸ್ಯೆಗಳಿಗೆ ಉತ್ತರವನ್ನು ಪಡೆದುಕೊಳ್ಳುತ್ತಿದ್ದರು. ಗೀತೆಗೆ ಮಾತೃ ಸ್ಥಾನವನ್ನು ನೀಡಿದ್ದರು. ಗೀತಾ ಬೋಧೆಗಳಿಂದ ಆಕರ್ಷಿತರಾಗಿ ಗೀತಾ ತತ್ವವಾದ ಅಹಿಂಸೆ ಒಂದನ್ನು ಅಸ್ತ್ರವನ್ನಾಗಿಸಿಕೊಂಡು ಆಧುನಿಕ ಮದ್ದು ಗುಂಡುಗಳಿಂದ ಭಾರತವನ್ನಾಳುತ್ತಿದ್ದ ಬ್ರಿತಿಷರನ್ನೂ ಸಹ ಭಾರತದಿಂದ ಓಡಿಸಿದರು. ಆಚಾರ್ಯವಿನೋಬಾ ಭಾವೆಯವರು ಗೀತೆ ನನ್ನ ಪ್ರಾಣ, ನನ್ನ ಹೃದಯ ಮತ್ತು ನನ್ನ ಬುದ್ಧ್ದಿಗಳು ಗೀತೆಮಾತೆಯ ಹಾಲಿನಿಂದ ಪ್ರಯೋಜನ ಪಡೆದಿರುವೆ ಎಂದಿದ್ದಾರೆ. ಇತಿಹಾಸದಲ್ಲಿ ತಿಳಿದು ಬರುವ ಮಹಾನ್ ಚಕ್ರವರ್ತಿಯಾಗಿದ್ದ ನೆಪೋಲಿಯನ್ ಭಾರತದಿಂದ ಅಮೂಲ್ಯವಾದ ಭಗವದ್ಗೀತೆಯನ್ನೂ ತನ್ನೊಂದಿಗೆ ತೆಗೆದುಕೊಂಡು ಹೋದನು.

ಭಗವದ್ಗೀತೆಯನ್ನು ಶ್ರೀ ಕೃಷ್ಣ ಪರಮಾತ್ಮನು ಶೋಕ ತಪ್ತನಾದ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಹೇಳುತ್ತಾನೆ. ಭಗವಂತನು ಭಗವದ್ಗೀತೆಯಲ್ಲಿ ಮೋಕ್ಷವನ್ನು ಹೊಂದಲು ಮೂರು ಮಾರ್ಗಗಳನ್ನು ಸೂಚಿಸಿದ್ದಾನೆ. ಜ್ಞಾನಯೋಗ, ಕರ್ಮಯೋಗ, ಭಕ್ತಿಯೋU. ಇವು ಬೇರೆ ಬೇರೆ ಮಾರ್ಗಗಳಂತೆ ಹೊರನೋಟಕ್ಕೆ ಕಂಡು ಬಂದರೂ ಇವು ಪರಸ್ಪರ ಪೂರಕವಾಗಿಯೇ ಇವೆ. ಭಕ್ತಿಯಿಲ್ಲದೆ ಜ್ಞಾನವು ದೊರೆಯಲಾರದು. ಜ್ಞಾನ ಭಕ್ತಿಗಳನ್ನೊಳಗೊಂಡ ಕರ್ಮವೇ ನಿಜವಾದ ಕರ್ಮ ಎನಿಸೀತು. ನಿಷ್ಕಾಮ ಕರ್ಮವೇ ಅತಿ ಶ್ರೇಷ್ಠವಾದುದು. ಕರ್ಮವು ಬಂಧನಕ್ಕೆ ಕಾರಣವು ಆದರೆ ನಿಷ್ಕಾಮ ಬುದ್ಧಿಯಿಂದ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗದೆ ಮೋಕ್ಷಕ್ಕೇ ಕಾರಣವಾಗುವುದು. ಭಕ್ತಿಯು ಎಂತಹ ಮಹತ್ತರವಾದುದೆಂದರೆ, ಗೀತೆಯ ಕೊನೆಯ ಅಧ್ಯಾಯದಲ್ಲಿ ತಿಳಿಸಿದೆ ಅದೇನೆಂದರೆ ನಿಜವಾದ ಭಕ್ತನು ನನಗೆ ಅತ್ಯಂತ ಪ್ರಿಯನು ನಿಜವಾದ ಭಕ್ತನಿಗೆ ಯಾವ ಧರ್ಮವನ್ನೂ ಅವಲಂಬಿಸುವ ಅವಷ್ಯಕತೆ ಇಲ್ಲವೆಂದು ಶ್ರೀ ಕೃಷ್ಣ ಹೇಳಿದ್ದಾನೆ. ಇನ್ನು ಜ್ಞಾನದ ಬಗ್ಗೆ ನಿಮಗೆ ತಿಳಿದೇ ಇದೆ. ‘ ನ ಹಿ ಜ್ಞಾನೇನ ಸದೃಶಂ ’ ಎಂಬಂತೆ ಆತ್ಮ ಜ್ಞಾನ ಪ್ರತಿಯೊಬ್ಬರಿಗೂ ಬೇಕಾಗಿರುವ ವಿಚಾರ ಅದು ಗೀತೆಯಲ್ಲಿ ಲಭ್ಯ! ನಮ್ಮ ಜೀವನಕ್ಕೆ ಅತ್ಯಾವಶ್ಯಕವಾದ ಗುಣವನ್ನು ಇಲ್ಲಿ ತಿಳಿಸಲಾಗಿದೆ ಅದು ‘ ಸುಖ ದುಃಖೇ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ ’ . ಇಂತಹ ಅನೇಕ ಮುತ್ತುಗಳು ರತ್ನಗಳು ಗೀತೆಯಲ್ಲಿವೆ. ಗೀತೆ ಎಂಬ ಸಮುದ್ರದಲ್ಲಿ ಮಳುಗಿ ಮುತ್ತು ರತ್ನಗಳನ್ನು ಪಡೆಯಬೇಕಾಗಿದೆ.

ನಾನಾರೆಂಬ ಪ್ರಶ್ನೆ ನಮ್ಮಲ್ಲಿ ಉಂಟಾಗುವುದೇ ಹಲವಾರು ಜನ್ಮಗಳ ಸಂಸ್ಕಾರದಿಂದ. ನಾನ್ಯಾರು, ಆತ್ಮವೆಂದರೇನು, ಎಲ್ಲಿಂದ ಬಂದೆ, ಸಾವಿನ ನಂತರ ಏನಾಗುತ್ತದೆ. ಈ ಎಲ್ಲಾ ಪ್ರಪಂಚವನ್ನು ನಡೆಸುತ್ತಿರುವವರು ಯಾರು? ಆ ಪರಮಾತ್ಮನನ್ನು ಪಡೆಯುವುದು ಹೇಗೆ, ಮುಂತಾದ ಎಲ್ಲಾ ಪ್ರಶ್ನೆಗಳು ಇಂದಿಗೂ ಯಕ್ಷ ಪ್ರಶ್ನೆಗಳಾಗಿಯೇ ಉಳಿದಿವೆ. ಅನೇಕ ಋಷಿಮುನಿಗಳು, ಮಹರ್ಷಿಗಳು ಧೀರ್ಘ ಕಾಲ ತಪಸ್ಸು ಮಾಡುವುದು ಈ ಪ್ರಶ್ನೆಗಳ ಉತ್ತರವನ್ನು ಪಡೆಯುವುದಕ್ಕಾಗಿಯೇ. ಒಂದು ಅದ್ಬುತ ವಿಚಾರವೆಂದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಭಗವಂತನು ಭಗವದ್ಗೀತೆಯಲ್ಲಿ ಸವಿಸ್ತಾರವಾಗಿತಿಳಿಸಿದ್ದಾನೆ.

ಗೀತೆಯ ಮೋಕ್ಷ ಸಂನ್ಯಾಸ ಯೋಗದಲ್ಲಿ ಪರಮಾತ್ಮನನ್ನು ಪಡೆಯಲು ಅತ್ಯಂತ ಪ್ರಭಲವಾದ ಅಸ್ತ್ರವನ್ನು ತಿಳಿಸಿದ್ದಾನೆ ಅದೇ ‘ಶರಣಾಗತಿ’ . ಪರಮಾತ್ಮನಲ್ಲಿ ಶರಣಾಗತಿಯನ್ನು ಹೊಂದಿದರೆ ಆಗ ನಮ್ಮೆಲ್ಲಾ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳುತ್ತಾನೆ. ಭಗವದ್ಗೀತೆಯ ಮತ್ತೊಂದು ವಿಶೇಷವೆಂದರೆ ಸನ್ಯಾಸತ್ವದ ಅಶ್ಯಕತೆ ಇಲ್ಲದೆ ಸಂಸಾರದಲ್ಲಿದ್ದುಕೊಂಡೇ ಹೇಗೆ ಮೋಕ್ಷವನ್ನು ಪಡೆಯಬಹುದೆಂಬ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ.

ವಿಜ್ಞಾನ ಯುಗದ ಮಾನವ ಇಂದು ಇಡೀ ಬ್ರಹ್ಮಾಂಡವನ್ನೆಲ್ಲಾ ಅಭ್ಯಸಿಸಲು ಹೊರಟಿದ್ದಾನೆ. ಅತಿ ದೊಡ್ಡದಾದ ಹಿಮಾಲಯ ಪರ್ವತವನ್ನೆಲ್ಲಾ ಜಾಲಾಡಿಬಿಟ್ಟಿದ್ದಾನೆ. ಸಮುದ್ರಗಳೆನ್ನೆಲ್ಲಾ ಅಭ್ಯಸಿಸಿ ಅದರ ಲಾಭವನ್ನೂ ಪಡೆಯುತ್ತಿದ್ದಾನೆ. ಆಗಸದಲ್ಲಿರುವ ಸೂರ್ಯ, ಚಂದ್ರ ಗ್ರಹಾದಿಗಳನ್ನು ಅಭ್ಯಸಿಸಿ ಅಕ್ಕ ಪಕ್ಕದ ನಕ್ಷತ್ರಗಳನ್ನೂ ಕಾಣಲು ಹೊರಟಿದ್ದಾನೆ ಆದರೆ ಮಾನವ ತನ್ನನ್ನು ತಾನು ಮಾತ್ರ ಅರಿತುಕೊಂಡಿಲ್ಲ! ಆದ್ದರಿಂದಲೇ ಜ್ಞಾನಿಗಳು ಹೇಳುತ್ತಾರೆ, ಹೊರಗಿನ ಪ್ರಯಾಣ ಸಾಕು, ಇನ್ನು ಮುಂದೆ ನಿನ್ನೊಳಗೆ ನೀನು ಪ್ರಯಾಣ ಮಾಡು. ಎಂದು ಹೇಳಿದ್ದಾರೆ. ಅಂದರೆ ನಿನ್ನಲ್ಲಿರುವ ಆತ್ಮನನ್ನು ಅರಿಯುವುದು. ನಿನ್ನೊಳಗೆ ನೀನು ಪ್ರಯಾಣ ಹೇಗೆ ಮಾಡಬೇಕೆಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಬಹಳ ವಿಚಾರಗಳನ್ನು ತಿಳಿಸಿದ್ದಾನೆ. ಎಲ್ಲಾ ಮತ, ಪಂಥ, ಧರ್ಮಗಳಿಗೂ ಮೆಚ್ಚುಗೆಯಾಗಿರುವ ಮತ್ತು ಸಾರ್ವಕಾಲಿಕ ಸತ್ಯಗಳನ್ನು, ಮೌಲ್ಯಗಳನ್ನು ಒಳಗೊಂಡಿರುವ ಶ್ರೇಷ್ಠವಾದ ಗ್ರಂಥವಾಗಿದೆ ಭಗವದ್ಗೀತೆ. ಇಂತಹ ಗೀತೆ ಸರ್ವೋತ್ಕೃಷ್ಠವೆನಿಸಿದೆ. ಶ್ರೀ ಕೃಷ್ಣನು ಅರ್ಜುನನನ್ನು ನೆಪಮಾಡಿಕೊಂಡು ಇಡೀ ಮಾನವ ಜನಾಂಗವನ್ನು ಉದ್ಧರಿಸಲು ನೀಡಿರುವ ಅಮೂಲ್ಯ ಕೊಡುಗೆ ಯಾಗಿದೆ.


ನಮ್ಮ ಸಂಪಾದಕ ಮಂಡಳಿಯ ಮಹನೀಯರುಗಳು

ಶ್ರೀಮತಿ ಶಾರದಾ ಗೋಪಾಲ್
ಪ್ರಧಾನ ಸಂಪಾದಕರು
ಶ್ರೀಯುತ ಎಸ್. ರಾಜಗೋಪಾಲ ಗುಪ್ತ
ಗೌರವ ಸಂಪಾದಕರು
 
ಶ್ರೀಯುತ ಎಸ್. ಸತ್ಯನಾರಾಯಣ ಶ್ರೇಷ್ಠಿ
ಸಹ ಸಂಪಾದಕರು
ಶ್ರೀಮತಿ ಪ್ರೇಮ ಕೋದಂಡರಾಮ್
ಸಹ ಸಂಪಾದಕರು
 
ಶ್ರೀಯುತ ವೈ. ಗೋಪಾಲಕೃಷ್ಣ ಗುಪ್ತ
ಸಹ ಸಂಪಾದಕರು
ಶ್ರೀಮತಿ ಸರೋಜಾ ಗೋವಿಂದರಾಜ್
ಸಹ ಸಂಪಾದಕರು
 
ಶ್ರೀಯುತ ಎಸ್.ಆರ್.ಪವನ್
ಸಹ ಸಂಪಾದಕರು
ಶ್ರೀಯುತ ಎನ್.ಶೇಷಾಚಲಯ್ಯ
ಸಹ ಸಂಪಾದಕರು

ವಿಚಾರ

ಭಗವಂತ ಮನುಷ್ಯನ ಬುದ್ಧಿವಂತಿಕೆಯನ್ನು ನೋಡುವುದಿಲ್ಲ, ಹೃದಯವಂತಿಕೆಯನ್ನು ನೋಡುತ್ತಾನೆ.